ನಕ್ಷತ್ರ ವೀಕ್ಷಕ

ಯುರ್ಯಾನೊಸ್ಕಾಪಿಡೀ ಕುಟುಂಬಕ್ಕೆ ಸೇರಿದ ಒಂದು ಮೀನು (ಸ್ಟಾರ್‍ಗೇಜûರ್). ಯುರ್ಯಾನೊಸ್ಕೋಪಸ್ ಇದರ ಶಾಸ್ತ್ರೀಯ ಹೆಸರು. ದಕ್ಷಿಣ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರದ ಕರಾವಳಿಯಲ್ಲಿ ದೊರೆಯುತ್ತದೆ. ಸುಮಾರು 30 ಸೆಂಮೀ. ಉದ್ದಕ್ಕೆ ಬೆಳೆಯುವುದು. ಚಪ್ಪಟೆ ದೇಹ ಮತ್ತು ಘನಾಕೃತಿಯ ತಲೆ ಇರುವ ಈ ಮೀನು ಬಹಳ ಕುರೂಪಿ. ಕಣ್ಣುಗಳು ತಲೆಯ ಮೇಲ್ಭಾಗದಲ್ಲಿ ಇರುವುದರಿಂದ ಸದಾಕಾಲ ನಕ್ಷತ್ರಗಳನ್ನೇ ವೀಕ್ಷಿಸುವುವೋ ಎಂಬಂತೆ ನೆಟ್ಟಗೆ ಮೇಲಕ್ಕೆ ನೋಡುತ್ತಿರುವಂತೆ ಭಾಸವಾಗುತ್ತದೆ. ಆದ್ದರಿಂದಲೇ ಈ ಮೀನಿಗೆ ನಕ್ಷತ್ರವೀಕ್ಷಕ ಎಂಬ ಹೆಸರು ಬಂದಿದೆ. ಕಣ್ಣುಗಳ ಹಿಂಭಾಗದಲ್ಲಿ ಎರಡು ವಿದ್ಯುತ್ ಅಂಗಗಳುಂಟು. ಎಕ್ಸ್ಟ್ರಾಆಕ್ಯುಲರ್ ಸ್ನಾಯುಗಳ ಮಾರ್ಪಾಡಿನಿಂದ ರೂಪುಗೊಂಡಿರುವ ಇವು ಒಂದು ಸಲಕ್ಕೆ ಸುಮಾರು 50 ವೋಲ್ಟ್ ವಿದ್ಯುತ್ತನ್ನು ಉತ್ಪಾದಿಸಬಲ್ಲವು. ತಮ್ಮ ಎದೆಯನ್ನು ಆಘಾತಗೊಳಿಸಲು ಈ ವಿದ್ಯುತ್ತನ್ನು ಬಳಸಬಹುದೆಂದು ಶಂಕಿಸಲಾಗಿದೆ. ಆದರೆ ತಮ್ಮ ಸುತ್ತ ಒಂದು ವಿದ್ಯುತ್ ಕ್ಷೇತ್ರವನ್ನು ರಚಿಸಿ ಅದರಿಂದ ತಮ್ಮ ಹಿಂದೆಮುಂದೆ ಬರುವ ಇತರ ಜೀವಿಗಳನ್ನು ಪತ್ತೆಹಚ್ಚುವ ಸಾಧನವಾಗಿ ಈ ಅಂಗಗಳನ್ನು ಬಳಸಿಕೊಳ್ಳುವುದೆಂಬ ಊಹೆಯೂ ಇದೆ. ಈ ಮೀನುಗಳು ಬಂಡೆಗಳ ಮಧ್ಯೆ ಇರುವ ಉಸುಬಿನಲ್ಲಿ ಕಣ್ಣುಗಳನ್ನು ಬಿಟ್ಟು ತಮ್ಮ ಉಳಿದೆಲ್ಲ ದೇಹವನ್ನು ಹೂತುಕೊಂಡು ವಾಸಿಸುವ ಸ್ವಭಾವದವು. ಇವು ಈ ಸ್ಥಿತಿಯಲ್ಲಿಯೆ ಇದ್ದುಕೊಂಡು ತಮ್ಮ ಹತ್ತಿರ ಸುಳಿದಾಡುವ ಇತರ ಸಣ್ಣಪುಟ್ಟ ಪ್ರಾಣಿಗಳನ್ನು ಭಕ್ಷಿಸುತ್ತವೆ. ಆದರೆ ವಯಸ್ಕ ನಕ್ಷತ್ರವೀಕ್ಷಕಗಳಿಂದ ಸ್ವರೂಪದಲ್ಲಿ ಬೇರೆಯಾಗಿ ಕಾಣುವ ಮರಿನಕ್ಷತ್ರವೀಕ್ಷಕಗಳು ಮಹಾಸಾಗರದಲ್ಲಿ ತೇಲುತ್ತಿರುವಾಗ ಟ್ಯೂನ ಮೀನುಗಳ ಆಹಾರವಾಗುವುದುಂಟು. ನಕ್ಷತ್ರವೀಕ್ಷಕ ತಿನ್ನಲು ರುಚಿ. ಆದರೂ ಆರ್ಥಿಕ ದೃಷ್ಟಿಯಿಂದ ಈ ಮೀನು ಮುಖ್ಯವೆನಿಸಿಲ್ಲ.
(ಎಸ್.ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ